15th June 2025
ಚಡಚಣ : ಸತ್ಪçಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಹೊಂದಿರುವ ಶಿಕ್ಷಕವೃಂದ ಈ ಸಮಾಜದ ಸರ್ವಶ್ರೇಷ್ಠ ವ್ಯಕ್ತಿ ಅಂತಹ ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ. ಇವರು ಸಮಾಜಕ್ಕೆ ಸದಾ ಮಾರ್ಗದರ್ಶಕರಾಗಿರುತ್ತಾರೆ ಎಂದು ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ ಹೇಳಿದರು.
ಚಡಚಣ ಪಟ್ಟಣದಲ್ಲಿ ನಿವೃತ್ತ ಶಿಕ್ಷಕ ಐ ಎಮ್ ಬೇಂದ್ರೆಕರ ಅವರ ಅಭಿನಂದನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿ, ಸಂಸ್ಕಾರ ಕಲಿಸಿ ಸಮಾಜ ಸೇವೆ ಮಾಡಿದ ಶಿಕ್ಷಕರು ನಿವೃತ್ತಿಯಾಗುವುದು ಸೇವಾ ದಾಖಲೆಯಲ್ಲಿ ಮಾತ್ರವೇ ಹೊರತು ನಿಜವಾದ ಅರ್ಥದಲ್ಲಿ ಸಮಾಜಕ್ಕೆ ಸದಾ ಮಾರ್ಗದರ್ಶಕರಾಗಿಯೇ ಇರುವ ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ.
ನನ್ನ ಆತ್ಮೀಯ ಒಡನಾಡಿ ಐ ಎಮ್ ಬೇಂದ್ರೆಕರ ಅದ್ಭುತ ಅಭಿನಂದನಾ ಸಮಾರಂಭ ನೋಡಿದರೆ ಅವರು ಶಿಕ್ಷಕ ಸಂಘಟನೆಗೆ ಹಾಗೂ ಈ ಸಮಾಜಕ್ಕೆ ನೀಡಿದ ಕೊಡುಗೆ ಎಷ್ಟು ದೊಡ್ಡದೆಂಬುದು ತೆರೆದ ಪುಸ್ತಕದಂತಿದೆ. ಬೇಂದ್ರೆಕರವರ ಜನ್ಮಭೂಮಿ ನನ್ನ ಮತಕ್ಷೇತ್ರ ಇಂಡಿ ಆಗಿದ್ದರೂ ಕೂಡಾ ಅವರ ಕರ್ಮ ಭೂಮಿ ಚಡಚಣ ಆಗಿದೆ.
ಚಡಚಣದಲ್ಲಿ ೨೫ ವರ್ಷಗಳ ಪ್ರಾಮಾಣಿಕ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ, ಶಿಕ್ಷಕರ, ಶಿಕ್ಷಕರ ಸಂಘಗಳ, ಹಾಗೂ ಸಮಾಜದ ಪ್ರೀತಿಗೆ ಪಾತ್ರರಾಗಿದ್ದಾರೆ. ಶಾಸಕನಾಗಿ ನಾನು ನನ್ನ ಒಡನಾಡಿ ಶಿಕ್ಷಕ ಬೇಂದ್ರೆಕರ ಮಾಡಿದ ಅಪಾರ ಸೇವೆ ಬಗ್ಗೆ ನಾನು ಸದಾ ಹೆಮ್ಮೆ ಪಡುತ್ತೇನೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮ ಅಧ್ಯಕ್ಷ ವಹಿಸಿ ಮಾತನಾಡಿದ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಶಿಕ್ಷಕ ರಾಷ್ಟ್ರದ ಹಾಗೂ ಸಮಾಜದ ನಿಜವಾದ ಸೇವಕ ಇಂತಹ ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ ಇವರು ಸದಾ ಸಮಾಜದ ಸೇವಕರು ಹಾಗೂ ಮಾರ್ಗದರ್ಶಕರು. ಬೇಂದ್ರೆಕರ ಶ್ರೇಷ್ಠ ಶಿಕ್ಷಕರ ಸಾಲಿನಲ್ಲಿ ಇರುವ ಶಿಕ್ಷಕ.ಸಮಾಜಕ್ಕೆ ೩೧ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಅತ್ಯಂತ ಪ್ರಾಮಾಣಿಕ ಹಾಗೂ ಶ್ರೇಷ್ಠ ಶಿಕ್ಷಕ.
ವೃತ್ತಿಯೊಂದಿಗೆ ಶಿಕ್ಷಕ ಸಂಘಟನೆ ಬೆಳೆಸಿ ಶಿಕ್ಷಕರ ಸಾವಿರಾರು ಸಮಸ್ಯೆ ಗಳನ್ನು ಬಗೆಹರಿಸಿ ಶಿಕ್ಷಕರ ಪ್ರೀತಿಗೆ ಪಾತ್ರರಾದ ಹೆಮ್ಮೆಯ ಶಿಕ್ಷಕ. ನಿವೃತ್ತಿ ನಂತರವೂ ನಿಮ್ಮ ಸೇವೆ ಈ ಸಮಾಜಕ್ಕೆ ಹಾಗೂ ನಮ್ಮಂಥ ರಾಜಕಾರಣಿಗಳಿಗೆ ಬೆನ್ನೆಲುಬಾಗಿ ಇರಬೇಕು ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ ಶಿಕ್ಷಕ ಐ ಎಮ್ ಬೇಂದ್ರೇಕರ ಶಿಕ್ಷಕರಿಗೆ ಮೊದಲು ತ್ಯಾಗ ಭಾವನೆ ಇರಬೇಕು. ತ್ಯಾಗ ಮಾಡಿದ ಶಿಕ್ಷಕ ಮಾತ್ರ ಶಿಕ್ಷಕ ಸಂಘಟನೆಯಲ್ಲಿ, ಶಿಕ್ಷಕ ವೃತ್ತಿಯಲ್ಲಿ ಹಾಗೂ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ಇದಕ್ಕೆ ಜೀವಂತ ಉದಾಹರಣೆ ನಾನೇ ಎಂದರು. ಎಸ್ ಎಸ್ ಪಾಟೀಲ,ಎ ಎಸ್ ಸೋನಗಿ ನೇತೃತ್ವದ ಶಿಕ್ಷಕ ಸಂಘಟನೆ ಹಾಗೂ ಶಿಕ್ಷಕರು ತಮಗೆ ತೋರಿದ ಪ್ರೀತಿ ಹಾಗೂ ಅಭಿನಂದನಾ ಸಮಾರಂಭ ನನ್ನ ಜೀವನದ ಅತ್ಯಂತ ಶ್ರೇಷ್ಠ ಕ್ಷಣ ಎಂದು ಭಾವುಕರಾದರು.
ಪ್ರಸ್ತಾವಿಕವಾಗಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಎಸ್ ಎಸ್ ಪಾಟೀಲ ಕಳೆದ ೨೫ ವರ್ಷಗಳವೆರೆಗೆ ಐ ಎಮ್ ಬೇಂದ್ರೇಕರ ಮಾಡಿದ ತ್ಯಾಗ ಪ್ರಾಮಾಣಿಕ ಸೇವೆ ಕೊಂಡಾಡಿದರು.ಶಿಕ್ಷಕರ ಸಂಘಟನೆಗೆ ಅವರ ಕೊಡುಗೆ ಅಪಾರ ಅವರು ಸದಾ ಶಿಕ್ಷಕರ ಸೇವಕರಾಗಿದ್ದು ಸಂಘಟನೆಯ ಶಕ್ತಿಯಾಗಿದ್ದರು. ಅವರ ನಿವೃತ್ತಿ ನಮ್ಮ ಸಂಘಟನೆಗೆ ತುಂಬಲಾರದ ನಷ್ಟ. ನಮ್ಮ ಸಂಘಟನೆಗೆ ಹಾಗೂ ಶಿಕ್ಷಕರ ಸೇವೆಗೆ ಅವರ ಮಾರ್ಗದರ್ಶನ ಸದಾ ಇರಬೇಕೆಂದು ಕೇಳಿಕೊಂಡರು.
ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನೂರ ಮಾತನಾಡಿ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ನಡುವಿನ ಸೇತುವೆಯಾಗಿ ಬೇಂದ್ರೇಕರ ಮಾಡಿದ ಸೇವೆಯನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಪ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ, ಚಡಚಣ ಕೃಷಿ ಪತ್ತಿನ ಅಧ್ಯಕ್ಷ ಬಾಬುಗೌಡ ಪಾಟೀಲ, ನಿವೃತ್ತ ವೀರ ಯೋಧರ ಸಂಘದ ಅಧ್ಯಕ್ಷ ಕಾಂತುಗೌಡ ಪಾಟೀಲ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ ಎಸ್ ಸೋನಗಿ, ತಾಲ್ಲೂಕಿನ ವಿವಿಧ ನೌಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ನೌಕರ ಸಂಘದ ನಿರ್ದೇಶಕ ಸುನೀಲ ಯಳಮೇಲಿ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ನಿರ್ದೇಶಕ ಗುರು ಜೇವೂರ ಕಾರ್ಯಕ್ರಮ ನಿರೂಪಿಸಿದರು
ಅಹಿಂದ ನ್ಯಾಯವಾದಿಗಳ ಸಂಘದ ವತಿಯಿಂದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವಿ*